ನೀಲಗಾರರು -
	ದಕ್ಷಿಣ ಕರ್ನಾಟಕದ ದಕ್ಷಿಣ ಭಾಗದಲ್ಲಿ ಪ್ರಮುಖವಾಗಿ ಕಂಡುಬರುವ ಧಾರ್ಮಿಕ ವೃತ್ತಿಗಾಯಕರು. ಮಂಟೇಸ್ವಾಮಿಯ ಶಿಷ್ಯರಾದ ಚಿಕ್ಕಲ್ಲೂರು ಸಿದ್ದಪ್ಪಾಜಿಯವರ, ಕಪ್ಪಡಿ ರಾಜಪ್ಪಾಜಿಯವರ, ಮಳವಳ್ಳಿ ಹಾಗೂ ಬೊಪ್ಪಗೌಡನಪುರದ ಅರಸುಮನೆತನದ ಸ್ವಾಮಿಗಳ ಮಹಿಮೆಯ ಪ್ರಸಾರಕ್ಕೆ ಮೀಸಲಾದ ವಿಶಿಷ್ಟ ಭಕ್ತರಿವರು. 800 ವರ್ಷಗಳ ಹಿಂದಿನ ಧಾರ್ಮಿಕ ಹೊನಲೊಂದು ಕರ್ನಾಟಕದ ಆ ತುದಿಯ ಕಲ್ಯಾಣದಿಂದ ದಕ್ಷಿಣ ಅಂಚಿನ ಚಿಕ್ಕಲ್ಲೂರವರೆಗೆ ಹರಿದು ಹಬ್ಬಿದುದರ ಅದ್ಭುತಕತೆಯನ್ನು (ಲೀಲೆ) ಪ್ರಧಾನವಾಗಿ ಇವರು ಹಾಡುತ್ತಾರೆ. ಇವರು ನಿಜವಾಗಿ ಲೀಲೆಗಾರರು, ಜನರ ಬಾಯಲ್ಲಿ ನೀಲಗಾರರು ಆಗಿದ್ದಾರೆ. ತಿಳಿದ ಇತರರ ಬಾಯಲ್ಲಿ ಇವರು ವಚನಕಾರರು, ತಾವೇ ಹೇಳಿಕೊಳ್ಳುವಂತೆ ಮಂಟೇದವರು, ಮಂಟೇದೇವರು ಮಂಟೇಸ್ವಾಮಿಗಳೂ ಹೌದು.

	ತಲೆಯಲ್ಲಿ ಕೆಂಪುರುಮಾಲು, ಮೈಯಲ್ಲಿ ಕರಿಯ ಮೇಲಂಗಿ, ಮಂಡಿಯಿಂದ ತುಸು ಕೆಳಗೆ ಚಾಚಿರುವ ಕಚ್ಚೆಯ ಪಂಚೆ, ಕೈಯಲ್ಲಿ ಪುರಾತನವೆಂಬಂತಿರುವ ಅಷ್ಟೇನೂ ಉದ್ದವಲ್ಲದ ನಾಗರ ಹೆಡೆಯ ಅಥವಾ ಸಿಂಹಮುಖದ ಕರಿಯ ತಂಬೂರಿ, ಜೊತೆಯಲ್ಲಿ ಚಿಟಗಿ ಅಥವಾ ಹೆಬ್ಬೆರಳಿನಲ್ಲಿ ಎರಡು ಗಗ್ಗರಗಳೂ, ಹಣೆಯಲ್ಲಿ ಭಸ್ಮ, ಜೊತೆಗೆ ಕುಂಕುಮದ ತಿಲಕ, ಕೊರಳಲ್ಲಿ ಮೂರು ರುದ್ರಾಕ್ಷಿ-ಇದು ಇವರ ವೇಷ.

	ದಕ್ಷಿಣ ಕರ್ನಾಟಕದ ಈ ನೀಲಗಾರ ಸಂಪ್ರದಾಯ ಇತರ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ನೀಲಗಾರರು ಧಾರ್ಮಿಕ ಸಂಪ್ರದಾಯಕ್ಕೆ ಸೇರಿದವರಾದರೂ ಯಾವ ಪಂಥದವರೂ ಅಲ್ಲ. ಧಾರ್ಮಿಕ ಸಂಪ್ರದಾಯ ಯಾವುದಾದರೂ ಆರಾಧ್ಯದೈವದ ಹಿನ್ನೆಲೆಯಲ್ಲಿ ಶಿಷ್ಟವಾದ ವರ್ಗದ ಗಾಯಕರನ್ನು ಸೃಷ್ಟಿಸಿಕೊಳ್ಳುತ್ತದೆ. ತಮ್ಮ ದೈವದ ಮಹಿಮೆಯನ್ನು ವಿಸ್ತಾರ ಮಾಡುತ್ತ ಅದ್ಭುತ ಕಥೆಗಳನ್ನು ಕಟ್ಟಿ ಹಾಡುತ್ತ ಈ ಕಲಾವಿದರು ತಮ್ಮ ಧರ್ಮಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಕಲಾವಿದರೆಲ್ಲರೂ ವಂಶಪಾರಂಪರ್ಯವಾಗಿಯೋ ಗುರುಶಿಷ್ಯ ಸಂಬಂಧವಾಗಿಯೋ ಆಯಾ ದೈವದ ಹೆಸರಿನಲ್ಲಿ ದೀಕ್ಷೆಯನ್ನು ಸ್ವೀಕರಿಸಿ ತಮ್ಮ ಬದುಕಿನ ಉದ್ದಕ್ಕೂ ಹಾಡುಗಾರಿಕೆಯನ್ನು ವಿಶೇಷ ವೃತ್ತಿಯಾಗಿ ಸ್ವೀಕರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಸಮಗ್ರ ರಾತ್ರಿಯೆಲ್ಲ ಕತೆಯನ್ನು ಹಾಡಿ ಕಾಣಿಕೆ ಪಡೆಯುತ್ತಾರೆ. ಉಳಿದ ದಿನಗಳಲ್ಲಿ ಅಂದರೆ ಸಾಮಾನ್ಯವಾಗಿ ಸೋಮವಾರ, ಶುಕ್ರವಾರ ಮತ್ತು ಅಮಾವಾಸ್ಯೆಯ ದಿನ ತಮ್ಮ ದೈವದ ಹೆಸರಿನಲ್ಲಿ ಭಿಕ್ಷಾಟನೆ ನಡೆಸುತ್ತಾರೆ.

	ತಮ್ಮ ಧಾರ್ಮಿಕ ಕಥೆಗಳ ಜೊತೆಗೆ ಅನೇಕ ಲೌಕಿಕ ಕಥೆಗಳನ್ನೂ ಈ ಸಂಪ್ರದಾಯದ ಹಾಡುಗಾರರು ಜನರನ್ನು ಆಕರ್ಷಿಸಲು ಕಲಿತಿರುತ್ತಾರೆ. ಮುಖ್ಯವಾದ ಕೆಲವು ಕಥೆಗಳನ್ನು ಮಾತ್ರ ಇಲ್ಲಿ ಹೆಸರಿಸಬಹುದು.

	ಚೆಲುವ ಚೆನ್ನಿಗರಾಮ, ಮೈದಾಳು ರಾಮಣ್ಣ, ನಂಜಯ್ಯ ಚಾಮುಂಡಿ, ಸಾರಂಗಧರ, ಪಿರಿಯಪಟ್ಟಣದ ಲಾವಣಿ, ಅರ್ಜುನಜೋಗಿ ಹಾಡು, ಗಣಪತಿರಾಜ, ಬಂಜೆ ಹೊನ್ನಮ್ಮ, ಚೆಲುವರಾಯ, ಬಾಲನಾಗಮ್ಮ.

ನೀಲಗಾರರು ಮೇಲಿನ ಕತೆಗಳನ್ನು ತಮ್ಮ ನಾಡುತಂಬೂರಿ ಶ್ರುತಿಯ ಹಿನ್ನೆಲೆಯಲ್ಲಿ ಹಾಡುತ್ತಾರೆ. ಧಾರ್ಮಿಕ ಕತೆಗಳನ್ನು ಹಾಡುವಾಗ ಸಿದ್ದಯ್ಯ ಶಿವನೇ ಬನ್ನಿ ಅಥವಾ ಪರಂಜ್ಯೋತಿ ನೀವೆ ಬನ್ನಿ-ಮಂಟೇದ ಲಿಂಗಯ್ಯ ನೀವೆ ಬನ್ನಿ ಎಂದು ಸೊಲ್ಲು ಸೊಲ್ಲಿಗೂ ಗುರು ಸಿದ್ದಪ್ಪಾಜಿಯನ್ನು ನೆನೆಯುತ್ತ ತಂಬೂರಿಯನ್ನು ನುಡಿಸುತ್ತ ಕತೆಗೆ ತೊಡಗುತ್ತಾನೆ ಮುಖ್ಯ ಕತೆಗಾರ. ಹಿಮ್ಮೇಳದವರು ತಾಳ, ಏಕತಾರಿಗಳನ್ನು ನುಡಿಸುತ್ತಾರೆ. ಇವರ ಹಾಡುವ ಮುಖ್ಯ ಧಾರ್ಮಿಕ ಕಥೆಗಳೆಂದರೆ-ಧರೆಗೆ ದೊಡ್ಡವರು, ಮಂಟೇದ ಒಡೆಯ, ಹಲಗೂರು ಪವಾಡ.									(ಟಿ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ